Monday, January 9, 2017

ಹೃದಯ ಹಾಡಿದೆ....

"ಹೃದಯ ಹಾಡಿದೆ ನವ ಋತುಗಾನ "
        ಹೃದಯ ಹಾಡಿದೆ ನವ ಋತುಗಾನ
        ತಾಯಿ ಭವಾನಿಯ "ವಿಜಯ ಶ್ರೀ"ಗೆ//ಪ//
ಭಾವೋಲ್ಲಾಸ ಅರಳಿದೆ ಹೂಮನ
ಮೊಳಗಿದೆ ಕನ್ನಡ ದುಂದುಭಿಯ
ರಾಜ್ಯೋತ್ಸವ ,ತಾಯೋತ್ಸವ
ನಮ್ಮ ಕರ್ನಾಟಕ ರಾಜ್ಯೋತ್ಸವ  //ಅ.ಪ//
ಚಿನ್ನದ ಮಣ್ಣಲಿ ಚಂದನ ಹಾಸಿಗೆ
ಕನ್ನಡ ಕಬ್ಬಿಗ ಕಾವ್ಯದ ಕೃಷಿಗೆ
ಬಸವ ಪುರಂದರ ರಸ ಋಷಿ ಸ್ಪರ್ಶ
ಜಗದಗಲಕೂ ಹರಡಿದೆ ಆದರ್ಶ //೧//
ಮಲೆನಾಡಿನ ವನ ಹಸಿರಿನ ಐಸಿರಿ
ಬೆಡಗಿನ ಕೊಡಗಿನ ಕಾವೇರಿ
ನಯನ ಮನೋಹರ ಮೋಹಕ ಲಹರಿ
ಹೃನ್ಮನ ತಣಿಸುವ ಜೋಗದ ಧಾರೆಗೆ//೨//
ಕನ್ನಡ ಮಾತೆಯ ತನುಸಂಜಾತೆ
ಕ್ರಾಂತಿ ಕಹಳೆಯನೂದಿದ ವನಿತೆ
ಬೆಳವಡಿ,ಕಿತ್ತೂರಿನ ಗಾಥೆ
ಶೌರ್ಯದ ಮಡಿಲಿನ ಪುಣ್ಯ ಪುನೀತೆಗೆ//೩//
ಚೆಲುವಿನ ದಸರೆಯ ವೈಭವ ಸೊಬಗು
ನಾಡಿನ ಕನ್ನಡ ದೀವಿಗೆ ಬೆಳಗು
ಪ್ರಜ್ವಲಿಸಲಿ ಕನ್ನಡ ದೇವಳದಿ
ನಿತ್ಯ ಚೇತನದ ಕನ್ನಡ ಜ್ಯೋತಿಗೆ //೪//
**ಈರಣ್ಣ ಮೂಲೀಮನಿ(ಕಸ್ತೂರೀಪ್ರಿಯ)

No comments:

Post a Comment